ಹೇಸ್ಟಿಂಗ್ಸ್, ವಾರನ್
1732-1818. ಭಾರತದ ಪ್ರಥಮ ಗವರ್ನರ್ ಜನರಲ್(1773-85). 1732ರಲ್ಲಿ ಇಂಗ್ಲೆಂಡಿನ ಆಕ್ಸ್‍ಫರ್ಡ್ ಷೈರ್‍ನ ಚರ್ಚಿಲ್‍ನಲ್ಲಿ ಜನಿಸಿದ. ಇವನು ತನ್ನ 17ನೆಯ ವಯಸ್ಸಿನಲ್ಲಿ ಈಸ್ಟ್ ಇಂಡಿಯ ಕಂಪನಿಯಲ್ಲಿ ಗುಮಾಸ್ತನಾಗಿ ಭಾರತಕ್ಕೆ ಬಂದ. ಕಂಪನಿ ಸರ್ಕಾರದಲ್ಲಿ ಹಲವಾರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಬಂಗಾಲದ ರಾಜ್ಯಪಾಲನಾಗಿ ನೇಮಕವಾದ(1772). ಅನಂತರ ರೆಗ್ಯೂಲೇಟಿಂಗ್ ಕಾಯಿದೆ ಪ್ರಕಾರ ಬಂಗಾಲದ ಪ್ರಥಮ ಗವರ್ನರ್ ಜನರಲ್ ಆದ(1773). ಇವನ ಆಡಳಿತಾವಧಿಯಲ್ಲಿ ಅನೇಕ ಗಮನಾರ್ಹ ಸುಧಾರಣೆಗಳನ್ನು ಜಾರಿಗೊಳಿಸಿದ. ಕಂಪನಿ ವ್ಯವಹಾರಗಳನ್ನು ಒಂದುಗೂಡಿಸಿದ. ಬಂಗಾಲದ ದ್ವಿಸರ್ಕಾರ ಪದ್ಧತಿ ರದ್ದುಪಡಿಸಿದ. ಕಂಪನಿ ಖಜಾನೆಯನ್ನು ಮುರ್ಷಿದಾ ಬಾದ್‍ನಿಂದ ಕಲ್ಕತ್ತಕ್ಕೆ ವರ್ಗಾಯಿಸಿದ. ಕಂದಾಯ ಸುಧಾರಣೆಗೊಳಿಸಿ ಐದು ವರ್ಷಗಳ ಅವಧಿಗೆ ಕಂದಾಯ ನಿಗದಿ ಪಡಿಸುವುದರ ಜೊತೆಗೆ ಹರಾಜಿನಲ್ಲಿ ಹೆಚ್ಚು ಹಣಕೊಡುವ ಶ್ರೀಮಂತರಿಗೆ ನೀಡಿದ. ಪುನಃ ಈ ಅವಧಿಯನ್ನು ಎರಡು ವರ್ಷಕ್ಕೆ ಇಳಿಸಿದ(1771). ಜಿಲ್ಲಾಧಿಕಾರಿ ಹಾಗೂ ಇತರ ಕಂದಾಯ ಅಧಿಕಾರಿಗಳ ನೇಮಕಮಾಡಿದ. ನ್ಯಾಯಾಂಗ ಕ್ಷೇತ್ರ ಸುಧಾರಣೆಗೊಳಿಸಿ ಜಿಲ್ಲಾಮಟ್ಟದಲ್ಲಿ ದಿವಾನಿ ಮತ್ತು ಫೌಜುದಾರಿ ನ್ಯಾಯಾಲಯಗಳನ್ನು ಸ್ಥಾಪಿಸಿದ, ಕಲ್ಕತ್ತದಲ್ಲಿ ಸಾದರ್‍ದಿವಾನಿ ಮತ್ತು ನಿಜಾಮತ್ ಅದಾಲತ್ ನ್ಯಾಯಾಲಯಗಳನ್ನು ಸ್ಥಾಪಿಸಿ ಕಾನೂನು, ಶಿಸ್ತು ಕಾಪಾಡಲು ಪ್ರತಿ ಜಿಲ್ಲೆಗೆ ಪೊಲೀಸ್ ಸೂಪರಿಂಡೆಂಟರನ್ನು ನೇಮಿಸಿದ. ಹಿಂದು ಮುಸ್ಲಿಮ್ ಕಾನೂನುಗಳನ್ನು ಕ್ರೋಡೀಕರಣಗೊಳಿಸಿದ. ಇವನು ಪರ್ಷಿಯನ್, ಬಂಗಾಲಿ ಭಾಷೆಗಳಲ್ಲಿ ಪರಿಣತಿ ಪಡೆದಿದ್ದ. ಐರೋಪ್ಯ ವಿದ್ವಾಂಸರಿಗೆ ಸಂಸ್ಕøತ ಸಾಹಿತ್ಯ ಅಧ್ಯಯನಕ್ಕೆ ಅನುಕೂಲ ಮಾಡಿಕೊಟ್ಟ, ಮುದ್ರಣಾಲಯಗಳನ್ನು ಸ್ಥಾಪಿಸಿದ. ಕಲ್ಕತ್ತದಲ್ಲಿ ಮದರಸ ಸ್ಥಾಪಿಸಿದ. ರಾಯಲ್ ಏಷ್ಯಾಟಿಕ್ ಸೊಸೈಟಿ, ಸ್ಥಾಪಿಸಿದ ಕೀರ್ತಿ ಇವನಿಗೆ ಸಲ್ಲುತ್ತದೆ. ಇವನ ಆಳಿಕೆಯಲ್ಲಿ ರೋಹಿಲ್ ಯುದ್ದ(1774), ಮೊದಲ ಬ್ರಿಟಿಷ್-ಮರಾಠಯುದ್ಧ (1778-82), ಎರಡನೆಯ ಬ್ರಿಟಿಷ್-ಮರಾಠಯುದ್ಧ(1803-04), ಎರಡನೆಯ ಬ್ರಿಟಿಷ್-ಮೈಸೂರುಯುದ್ಧ (1880-84) ಮೊದಲಾದ ಯುದ್ಧಗಳು ನಡೆದವು. ಇವನು ಪಿಟ್‍ಇಂಡಿಯ ಕಾಯಿದೆ ಜಾರಿಗೊಳಿಸಿದ. ಮೀರ್‍ಜಾಫರನ ವಿಧವೆ ರಾಣಿಯಿಂದ (ಮೂರುವರೆ ಲಕ್ಷ ರೂಪಾಯಿ) ಹಾಗೂ ಯುವರಾಣಿಯಿಂದ (ಒಂದುವರೆ ಲಕ್ಷ) ರೂಪಾಯಿ ಬಹುಮಾನ ವೆಂದು ಲಂಚ ಪಡೆದುದಕ್ಕೆ ಮಹಾರಾಜ ನಂದಕುಮಾರ್ ಇವನ ವಿರುದ್ಧ ಕಂಪನಿಗೆ ಆಪಾದಿಸಿದ. ಇದರಿಂದ ಕುಪಿತನಾದ ಈತ ನಂದಕುಮಾರ ಮತ್ತು ಅವನ ಅನುಯಾಯಿಗಳ ಮೇಲೆ ಸುಳ್ಳು ಆಪಾದನೆ ಹೊರಿಸಿ ಬಂಧಿಸಿ, ಕೊಲೆ ಮಾಡಿಸಿದ(1775). ಈ ಘಟನೆ ಇವನ ಜೀವನದಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯಿತು. ಅನೇಕ ಆಪಾದನೆಗಳಿಗೆ ಗುರಿಯಾದ ಈತ ಕಡೆಗೆ ತನ್ನ ಹುದ್ದಗೆ ರಾಜೀನಾಮೆ ನೀಡಿ ಸ್ವದೇಶಕ್ಕೆ ಮರಳಿದ(1785). ಬ್ರಿಟಿಷ್ ಪಾರ್ಲಿಮೆಂಟ್ ಇವನ ಮೇಲಿನ ಮೊಕ್ಕದಮೆಗಳನ್ನು ಆರು ವರ್ಷಗಳ ಕಾಲ ನಡೆಸಿ ನಿರ್ದೋಷಿ ಎಂದು ತೀರ್ಪು ನೀಡಿತು. ಇತಿಹಾಸ ವಿಮರ್ಶಕ ಪಿ.ಇ.ರಾಬರ್ಟ್ ಇವನನ್ನು ಶ್ರೇಷ್ಠ ರಾಜತಂತ್ರಜ್ಞ ಎಂದು ಹೊಗಳಿದ್ದಾನೆ. ಈತ 1818ರಲ್ಲಿ ನಿಧನ ಹೊಂದಿದ.							
		(ಡಿ.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ